ಕಿರುನಾಟಕ

 ಕಿರುನಾಟಕವೆಂದರೆ ನಾಟಕಕ್ಕಿಂತ ಚಿಕ್ಕದು; ಆದರೆ ಏಕಾಂಕ ನಾಟಕಕ್ಕಿಂತ ದೂಡ್ಡದು (ಷಾರ್ಟ್ ಪ್ಲೆ). ಏಕಾಂಕ ನಾಟಕವು ಕಿರುನಾಟಕವು ಹುಟ್ಟಿ ಬೆಳೆದು ರೂಢಿಗೆ ಬಂದ ಮೇಲೆ ಹಿಂದಿನಿಂದಲೂ ಇದ್ದ ನಾಟಕಕ್ಕೆ ಹೊಸದಾಗಿ ಪೂರ್ತಿ ಉದ್ದದ ನಾಟಕ (ಫುಲ್‍ಲೆಂಗ್ತ್ ಪ್ಲೆ) ಅಥವಾ ಪೂರ್ಣ ನಾಟಕ ಎಂಬ ಅಂಕಿತವನ್ನು ಅಂಟಿಸುವ ವಿದ್ಯಮಾನ ನಡೆಯಿತು. ಆದರೆ ಹಾಗೆ ಮಾಡುವುದಕ್ಕೆ ಯಾವ ಅಗತ್ಯವೂ ಇರಲಿಲ್ಲ. ಪ್ರಾಚೀನರ ಶಿಷ್ಟ ನಾಟಕವಾಗಲಿ ಹೊಸ ಹುಟ್ಟಿನವರ ರೊಮ್ಯಾಂಟಿಕ್ ನಾಟಕವಾಗಲಿ ನವಶಿಷ್ಟತೆಯ ನಾಟಕವಾಗಲಿ ಹತ್ತೊಂಬತ್ತನೆಯ ಶತಮಾನದ ಕಾವ್ಯ ರೂಪಕವಾಗಲಿ ಅವಕ್ಕೆ ನಿರ್ದಿಷ್ಟ ಪರಿಪುಷ್ಟಿ ಇದ್ದೇ ಇದೆ. ನಾಟಕಕ್ಕೆ ಐದು ಅಂಕ ಇರತಕ್ಕದು ಎಂಬುದು ನಾಟಕಕಾರರ ಬಳಕೆಯ ಸೂತ್ರ. ಐದಂಕ ಕೂಡಿದ್ದರೇ ನಾಟಕ ಎಂಬುದು ಆ ಸೂತ್ರದ ಅನುಮೇಯ. ಇಬ್ಸನ್ ಬಂದ ಮೇಲೆ ನಾಟಕಕ್ಕೆ ನಾಲ್ಕು ಅಂಕಗಳೇ ಸಾಕು ಎಂಬ ಅಭಿಪ್ರಾಯ ಬಲಗೊಂಡಿತು. ನಿಜವಾಗಿ ನಾಟಕಕ್ಕೆ ಅನುರೂಪವಾದ ವಿಸ್ತಾರವನ್ನು ನಿರ್ಣಯಿಸುವುದು ಘಟನೆಗಳು; ಘಟನಾವಳಿಗಳ ಸಮರ್ಪಕ ಸಂಖ್ಯೆ. ಅದು ಅತಿ ಎನ್ನಿಸಬಾರದು, ಚಿಕ್ಕದು ಎನ್ನಿಸಲೂಬಾರದು. ಇನ್ನೊಂದು ದೃಷ್ಟಿಯಿಂದ ಸುಮಾರು ಎರಡೂವರೆ ಅಥವಾ ಮೂರು ಘಂಟೆಗಳ ಕಾಲವನ್ನು ಯಾವ ಕೃತಿ ತನ್ನ ರಂಗಾಭಿನಯಕ್ಕೆ ನ್ಯಾಯವಾಗಿ ಬೇಡುತ್ತದೋ ಅದೇ ಪೂರ್ಣ ನಾಟಕ, ಸಮಗ್ರ ನಾಟಕ ಅಥವಾ ಸುಮ್ಮನೆ ಹೇಳುವುದಾದರೆ ನಾಟಕ.

 ಏಕಾಂಕ ನಾಟಕ ಅರ್ಥ ಸ್ವಯಂವೇದ್ಯ. ಅದು ನಾಟಕದ ಐದನೆಯ ಒಂದು ಭಾಗದಷ್ಟರ ಪರಿಮಿತಿಯಲ್ಲಿ ಅಡಕವಾದ, ಸಂಪೂರ್ಣ ಸ್ವತಂತ್ರವಾದ ಜಾತಿಗೆ ಸೇರುತ್ತವೆ.

 ಅದೇ ತೆರನ ನಿರ್ದೇಶನ ವಾಕ್ಯ ಕಿರುನಾಟಕಕ್ಕೂ ಸ್ಥೂಲವಾಗಿ ಸಲ್ಲುತ್ತದೆ. ಏಕಾಂಕದ ಎರಡರಷ್ಟು ಅದರ ಗರಿಷ್ಠ ಪರಿಮಿತಿ; ನಾಟಕದ ಅರ್ಧದಷ್ಟು ವರಿಷ್ಠ ಪರಿಮಿತಿ. ಇದು ಗಣಿತ ರೀತಿಯ ಲೆಕ್ಕಚಾರವಲ್ಲ. ಸಾಹಿತ್ಯ ಕೇಳುವ ವಿಷಯ ವಿವರಣೆ. ಕಿರುನಾಟಕದ ಕಥಾವಸ್ತುವಿನ ಪೂರ್ಣ ನಿರೂಪಣೆಗೆ ಎರಡೋ ಮೂರೋ ಅಂಕ ಸಾಕಾಗಬೇಕು. ಕಡಿಮೆಯಾದರೆ ಏಕಾಂಕವೋ ಕಿರುನಾಟಕವೋ ಎಂಬ ಸಂಶಯ ಏಳುತ್ತದೆ. ಹೆಚ್ಚಾದರೆ ತಕ್ಕ ನಾಟಕವಾಗಿ ರಚನೆಗೊಳ್ಳಲಿಲ್ಲ ಎಂಬ ಆಕ್ಷೇಪಣೆ ಏಳುತ್ತದೆ. ಶೂರ್ಪನಖಿಯ ನಾಸಚ್ಛೇದನ ಪ್ರಸಂಗ, ರಾಮನ ಪರಿಹಾಸದ ಪ್ರಸಂಗ ಮುಖ್ಯವಾದಲ್ಲಿ ಅದು ಏಕಾಂಕ ನಾಟಕಕ್ಕೆ ಮಾತ್ರ ಬರುತ್ತದೆ. ರಾಮ ಸುಗ್ರೀವ ಸಖ್ಯದ ವೃತ್ತಾಂತದಲ್ಲಿ ಅವರಿಬ್ಬರಿಗೂ ಹೆಚ್ಚು ಕಡಿಮೆ ಸರಿ ಸಮಾನಾದ ಪಾತ್ರವಿದೆಯಲ್ಲದೆ ಹನುಮಂತನಿಗೂ ಜವಾಬ್ದಾರಿ ಕಾರ್ಯವಿದೆಯಾಗಿ ಅದು ಕಿರುನಾಟಕವಾಗುವುದೇ ಒಳ್ಳೆಯದು.

 ಯಾವ ಬಗೆಯ ಸಾಹಿತ್ಯ ಕೃತಿಯಾದರೂ ಏಕತೆ ಅದನ್ನು ಆಳುವ ರಾಜ ನಿಯಮ. ನಾಟಕದಲ್ಲಿಯೂ ಏಕತೆಯನ್ನು ಉಲ್ಲಂಘಿಸಿದರೆ ಹಾನಿ.

 ಸುಮಾರು 1920 ರಿಂದ ಈಚಿನ ಕಾಲ ಕಿರುನಾಟಕ ಅವಧಿಯಾಗಿಬಿಟ್ಟಿದೆ. ಶಾಲಾ ಕಾಲೇಜುಗಳೂ ವಿದ್ಯಾರ್ಥಿಗಳು ನಾಟಕಾಭಿನಯದಲ್ಲಿ ವಿಶೇಷ ಆಸಕ್ತಿಯುಳ್ಳ ಹವ್ಯಾಸಿಗಳೂ ಇತರ ಸಂಘಗಳೂ ಚಿಕ್ಕಚಿಕ್ಕ ನಾಟಕಗಳನ್ನಾಡಿ ಆಹ್ವಾನಿತ ನೋಟಕರ ಸಂತೋಷಕ್ಕೆ ಮನೋರಂಜನೆ ಒದಗಿಸುವ ಪದ್ಧತಿ ವಿಪುಲವಾಗಿ ಹಬ್ಬಿ ಹರಡಿದೆ. ನೂರಾರು ಸಾವಿರಾರು ಕಿರುನಾಟಕಗಳು ತಯಾರಾಗುತ್ತಿವೆ. ಅವುಗಳಲ್ಲಿ ಅನೇಕ ಸಂಖ್ಯೆಯವು ಒಂದೆರಡು ದಿನವಿದ್ದು ಮಾಯವಾಗುವ ಕ್ಷಣಿಕ ಮಾದರಿಯವು. ಆದರೆ ಅವುಗಳಲ್ಲಿ ಕೆಲವಾದರೂ ಉಜ್ವಲ ಸಂಭಾಷಣೆ, ಬಿಗಿಯಾದ ಕಥಾಸಂಯೋಜನೆ, ಕಾತರವೆಬ್ಬಿಸಿ ಇಳಿಸಿ ಸಾಗುವ ಕಲಾತಂತ್ರ, ಅನಿರೀಕ್ಷಿತ ತಿರುಗಣೆ, ಬಿಕ್ಕಟ್ಟು, ಅಚ್ಚರಿ ಅಂತ್ಯ ಮುಂತಾದ ಕ್ರಮಗಳೆಲ್ಲವನ್ನೂ ಒಳಗೊಂಡು ನಿಜವಾಗಿ ನಾಟಕೀಯವಾಗಿ ಶಾಶ್ವತ ಸಾಹಿತ್ಯದ ಭಂಡಾರಕ್ಕೆ ಸೇರುವಂಥವಾಗಿವೆ.  

 ಕಿರುನಾಟಕದ ವಿಸ್ಮಯಕರ ಅಭಿವೃದ್ಧಿಗೆ ನಾಟಕದ ಕ್ಷೀಣತೆಯೂ ಒಂದು ಕಾರಣ. ಪ್ರಬಲ ಎದುರಾಳಿಯಾದ ಚಲನಚಿತ್ರದಿಂದ ನಾಟಕ ಕಂಗೆಟ್ಟಿದೆ. ಪ್ರದರ್ಶನಕ್ಕೆ ಸಜ್ಜಾದ ನಾಟಕ ಕಲೆ, ನುರಿತ ನಟವರ್ಗ, ಶಕ್ತಸಾಹಿತಿ, ನಿರ್ದೇಶಕರು ಮುಂತಾದ ದುಬಾರಿ ಸಲಕರಣೆ ನಾಟಕಕ್ಕೆ ಬೇಕು, ಅಷ್ಟಿದ್ದರೂ ಪ್ರೇಕ್ಷಕರು ಸಮೂಹಗೂಡಿ ಬಂದು ನೋಡಿ ನಲಿಯುತ್ತಾರೆಂಬ ಭರವಸೆಯಲ್ಲ.

 ಕಥಾವಸ್ತುವಿನ ವಿಚಾರದಲ್ಲಿ ಕಿರುನಾಟಕ ಸರ್ವಭಕ್ಷಕವಾಗಿದೆ, ವಾಸ್ತವ್ಯ, ಕಲ್ಪನೆ, ಚಿತ್ರಕಲ್ಪನೆ, ಸ್ವಪ್ನ ಯಾವುದರಿಂದ ಬೇಕಾದರೂ ಅದಕ್ಕೆ ವಿಷಯ ಸಾಮಗ್ರಿ ದೊರಕಬಹುದು.

 ಸ್ವಂತಿಕೆ, ವೈಶಿಷ್ಟ್ಯ ಮೊದಲಾದುವನ್ನು ಮೆರೆಯುವುದಕ್ಕೆ ಸಾಹಿತಿಗೆ ಕಿರುನಾಟಕದಲ್ಲಿ ಹೇರಳವಾದ ಅವಕಾಶವಿದೆ. ಬೊಂಬೆಯಾಟದ ಪಂಚ್ ಪಾತ್ರ, ಷೇಕ್ಸ್‍ಪಿಯರನ ಹ್ಯಾಮ್ಲೆಟ್, ಎಂಟನೆಯ ಹೆನ್ರಿಯ ಆರನೆಯ ಹೆಂಡತಿ, ರಣರಂಗದ ಒಂದು ರಾತ್ರಿ, ಯಾವುದು ತಾನೇ ಕಿರುನಾಟಕಕ್ಕೆ ರುಚಿಯಾಗಲಾರದು!

 ಕಿರುನಾಟಕದ ವ್ಯಾಪ್ತಿ ದಿನದಿನಕ್ಕೆ ಹೆಚ್ಚುತ್ತಿದೆ. ಸುಮಾರು ಇಪ್ಪತ್ತು ನಿಮಿಷದಿಂದ ನಲವತ್ತು-ಐವತ್ತು ನಿಮಿಷ ಕಾಲವನ್ನು ಪ್ರದರ್ಶನಕ್ಕೆ ತೆಗೆದುಕೊಳ್ಳುವ ಸಮಸ್ತ ಕೃತಿಗಳೂ ಕಿರುನಾಟಕವೆಂದೇ ಈಚಿನ ಭಾವನೆ. ಹಿಂದಿನ ಯುಗಗಳ ಸಣ್ಣ ರೂಪಕ ಕೃತಿಗಳಿಗೂ ಅದೇ ಹೆಸರನ್ನು ಸಮಾಧಾನದಿಂದ ಅನ್ವಯಿಸಲಾಗಿದೆ. ನೀತಿ ನಾಟಕ, ಇಂಟರ್ ಲ್ಯೂಡ್, ಪ್ರಹಸನ ಕೂಡ ಕಿರುನಾಟಕವೆಂಬ ವಿಭಾಗಕ್ಕೆ ಸೇರಿವೆ. ಏಕಾಂತ ನಾಟಕವೂ ಈಗ ಕಿರುನಾಟಕವೇ. ಒಂದೇ ನಾಟಕವನ್ನು ಕೆಲವಾರು ಏಕಾಂಕ ನಾಟಕವೆಂದು ಕರೆದರೆ ಇತರ ಕೆಲವರು ಕಿರುನಾಟಕವೆಂದು ಕರೆದಿದ್ದಾರೆ.

 ಕನ್ನಡದಲ್ಲಿ ಕೈಲಾಸಂ, ಕುವೆಂಪು, ಬೇಂದ್ರೆ, ಕೈವಾರ ರಾಜರಾವ್, ಶ್ರೀರಂಗ ರಾಶಿ, ನಾ ಕಸ್ತೂರಿ, ಪರ್ವತವಾಣಿ, ಕ್ಷೀರಸಾಗರ ಕೆ. ಗುಂಡಣ್ಣ ಮೊದಲಾದವರ ಅನೇಕ ಕಿರುನಾಟಕಗಳು ಜನಪ್ರಿಯವಾಗಿವೆ.

(ನೋಡಿ- ಉಪನಾಟಕಗಳು)

(ನೋಡಿ- ಏಕಾಂಕ-ನಾಟಕ)

(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ